ಹೊಸ ಹಾದಿಯ ಕನಸು 4
ಬಸ್ಸು ಪಿಸುಗುಟ್ಟುತ್ತಾ ಹೆಜ್ಜೆ ಹೆಜ್ಜೆಯಾಗಿ ಸಾಗುತ್ತಿತ್ತು. ಜನಸಂದಣಿ, ಬಿಸಿನಗರದ ಗಾಳಿಯಲ್ಲಿ ರಾಣಿ ಆಲೋಚನೆಯ ಜಾಲದಲ್ಲಿ ಮುಳುಗುತ್ತಾಳೆ. "ಈ ಪ್ರಯಾಣ ಕೇವಲ ಬಸ್‌ನಲ್ಲಿಯೇ ಅಂತ್ಯಗೊಳ್ಳುವುದಿಲ್ಲ," ಅವಳ ಅಂತರಾಳದ ಆಲೋಚನೆಗಳು ಬಲಹೀನವಾಗಿದ್ದರೂ ಆಕೆಗೆ ಆಸಕ್ತಿ ಮೂಡಿಸುತ್ತವೆ.
ಅಷ್ಟು ದಿನ ಹಳೆಯ ಪರಿಸರಕ್ಕೆ ಒಗ್ಗಿದ್ದ ರಾಣಿ, ಕಣ್ಣೆದುರಿನಲ್ಲಿಯೇ ಹಾದುಹೋಗುವ ದೊಡ್ಡ ದೊಡ್ಡ ಕಟ್ಟಡಗಳು, ಅಂಗಡಿಗಳು, ಬಟ್ಟೆಗಳ ಅಂಗಡಿಗಳಲ್ಲಿ ಬಣ್ಣ ಬಣ್ಣದ ಬಟ್ಟೆಗಳು, ಜನರ ವೈವಿಧ್ಯಮಯ ವೇಷಭೂಷಣಗಳನ್ನು ನೋಡಿದಾಗ ತಾನು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಿದ್ದೇನೆ ಎಂದುಕೊಂಡಳು. ರಾಣಿ ತನ್ನ ವಯಸ್ಸಿಗೆ ತಕ್ಕ ನೂರು ಕನಸುಗಳನ್ನು ಹೊತ್ತಿದ್ದಳು. ತನ್ನ ಯೋಚನಾ ಜಾಲದಲ್ಲಿ ಮುಳುಗಿದ್ದ ರಾಣಿಗೆ ಹಠಾತ್, ಬಸ್ಸು ಒಂದು ದೊಡ್ಡ ಗುಂಡಿಗೆ ಬಿದ್ದಂತೆ ತಿರುಗಿ ಹೋಗಿತು. ರಾಣಿ ತನ್ನ ಬ್ಯಾಗ್ ಬಿಗಿಯಾಗಿ ಹಿಡಿದುಕೊಂಡು, ಜಾಗರೂಕರಾಗಿ ಬಸ್‌ನಲ್ಲಿ ನಿಂತಿದ್ದಳು.
ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ತಾನು ಮುಂದು, ತಾನು ಮುಂದು ಎಂದು ಪೈಪೋಟಿಗೆ ನಿಂತು ಮುಂದೆ ಸಾಗುತಿದ್ದವು.2-3 ಸ್ಟಾಪ್‌ಗಳ ನಂತರ, ರಾಣಿಗೆ ಕುಳಿತುಕೊಳ್ಳಲು ಸೀಟ್ ಸಿಕ್ಕಿತು. ಅವಳ ಅಪ್ಪ ಶಿವಪ್ಪ ಹಿಂಬದಿ ಹೋಗಿ ಕುಳಿತುಕೊಂಡರು. ಬಸ್ ಮಾತ್ರ ಜನರನ್ನು ಹತ್ತಿಸುತ್ತಾ ಇಳಿಸುತ್ತಾ ಸಾಗುತ್ತಿತ್ತು."ಕಂಡಕ್ಟರ್, 'ಎಲ್ಲಿ ಹಿಂದಿನ ಬಸ್ ಮುಂದೆ ಹೋಗುತು' ಎಂದು ಜೋರಾಗಿ ಅವಸರದಿಂದ 'ರೈಟ್, ರೈಟ್' ಎನ್ನುತಿದ್ದ."ಡ್ರೈವರ್, ಬಸ್ ಅನ್ನು ಗುಂಡಿಗಳಲ್ಲಿ ಬಿದ್ದಂತೆ ಎತ್ತಿ-ಬೀಳಿಸುತ್ತಾ ಸಾಗಿಸುತ್ತಿದ್ದ.
ರಾಣಿ ಬಸ್‌ನಲ್ಲಿಯೇ ಹಿಂದೆ-ಮುಂದೆ ಬೀಳುತ್ತಾ, ಹಿಗ್ಗಿ-ಕುಗ್ಗಿ, ತನ್ನ ಚಿಂತನೆಗಳ ಜಾಲದಲ್ಲಿ ತತ್ತರಿಸುತ್ತಿದ್ದಳು. ಹೊರಗಿನ ಪ್ರಪಂಚವನ್ನು ಕಣ್ಣಾರೆ ನೋಡುತ್ತಿದ್ದರೂ, ಆಕೆಯ ಒಳಗಿನ ಪ್ರಪಂಚದ ಕಲ್ಪನೆಗಳ ಓಟವೇ ಬೇಗವಾಗಿತ್ತು. ಬೆರಳುಗಳಿಂದ ತನ್ನ ಬ್ಯಾಗ್ ಬಿಗಿಯಾಗಿ ಹಿಡಿದುಕೊಂಡಿದ್ದರೂ, ಮನಸ್ಸು ಮಾತ್ರ ಹುಚ್ಚು ಕೋಡಿ ಮನಸು, ಅದು ಹದಿನಾರರ ವಯಸ್ಸು...
ಮುಂದುವರೆಯುವುದು.....
Comments